ಅರ್ಥಶಾಸ್ತ್ರ ವಿಭಾಗ

ವಿಭಾಗದ ಕುರಿತು:

ಅರ್ಥಶಾಸ್ತ್ರ ವಿಭಾಗವು, ೧೯೮೨ ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದ ದಿನಾಂಕದಿಂದ ಮತ್ತು ೨೦೧೦ ರಲ್ಲಿ ಅಸ್ತಿತ್ವಕ್ಕೆ ಬಂದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಒಂದು ಪ್ರಮುಖ ವಿಭಾಗವಾಗಿ ಸುದೀರ್ಘ ಶೈಕ್ಷಣಿಕ ಸೇವೆಯನ್ನು ನೀಡುತ್ತಲಿದೆ. ಉತ್ತರ ಕರ್ನಾಟಕ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ, ನಮ್ಮ ವಿಭಾಗವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಸಂಗಮ ಆವರಣ ಬೆಳಗಾವಿ, ಎಸ್. ಆರ್. ಕಂಠಿ ಸ್ನಾತಕೋತ್ತರ ಕೇಂದ್ರ, ಬಾಗಲಕೋಟೆ ಮತ್ತು ಜೆ.ಎಸ್. ಎಸ್ ಮಹಾವಿದ್ಯಾಲಯ, ಗೋಕಾಕ- ಹೀಗೆ ಮೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಭಾಗದ ಒಟ್ಟು ವಿದ್ಯಾರ್ಥಿಗಳ ಪ್ರವೇಶಾತಿ ೧೫೦. ಅರ್ಥಶಾಸ್ತ್ರ ಸ್ನಾತಕೋತ್ತರ ಕೋರ್ಸಿನಲ್ಲಿ, ಅರ್ಥಶಾಸ್ತ್ರದ ಮುಖ್ಯ ವಿಷಯಗಳ ಜೊತೆಗೆ ಸಂಖ್ಯಾಶಾಸ್ತ್ರ, ಸಂಶೋಧನಾ ವಿಧಾನ, ಎಕಾನೊಮೆಟ್ರಿಕ್ಸ್, ಇತ್ಯಾದಿ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ನಾಲ್ಕನೇ ಸೆಮಿಸ್ಟರದಲ್ಲಿ ವೈಯಕ್ತಿಕ ಕಿರುಪ್ರಬಂಧವನ್ನು ಬರೆದು, ವಿಶ್ವವಿದ್ಯಾಲಯಕ್ಕೆ ಮೌಲ್ಯಮಾಪನಕ್ಕಾಗಿ ಸಲ್ಲಿಸುವುದು ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ. ನಮ್ಮ ವಿಭಾಗದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಅರ್ಹತಾ ಪರೀಕ್ಷೆಗಳ (ನೆಟ್/ಸ್ಲೇಟ್) ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರಿಂದ ಪ್ರಯೋಜನ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಕರ್ನಾಟಕದ ಒಳಗೆ ಮತ್ತು ಹೊರಗೆ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ವಿಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ. ಅರ್ಥಶಾಸ್ತ್ರ ವಿಭಾಗದಲ್ಲಿ ಒಟ್ಟು ಒಬ್ಬರು ಪ್ರಾಧ್ಯಾಪಕರು ಮತ್ತು ಒಬ್ಬರು ಸಹಾಯಕ ಪ್ರಾಧ್ಯಾಪಕರು ಬೋಧನಾ ಕಾರ್ಯದಲ್ಲಿ ತೊಡಗಿದ್ದಾರೆ ಇವರಿಬ್ಬರೂ ಸಂಶೋಧನಾ ಮಾರ್ಗದರ್ಶಕರಾಗಿದ್ದು ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುತ್ತಾರೆ ಇವರೆಲ್ಲರ ಮಾರ್ಗದರ್ಶನದಲ್ಲಿ 30 ಸಂಶೋಧನಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಶೋಧನಾ ಅಧ್ಯಯನವನ್ನು ಮುಂದುವರೆಸುತ್ತಿದ್ದಾರೆ.

ಧ್ಯಯೋದ್ದೇಶ:

ಅರ್ಥಶಾಸ್ತ್ರವನ್ನು ಕಲಿಯುವುದು ಮತ್ತು ಅರ್ಥಮಾಡಿಕೊಳ್ಳುವುದು ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶಿ ಸೂತ್ರವಾಗಿದ್ದು, ಮಾನವಕುಲದ ಕಲ್ಯಾಣಕ್ಕಾಗಿ ಜ್ಞಾನ ಆಧಾರಿತ ಜಾಗತೀಕರಣ ಸಮಾಜದಿಂದ ಹೊರಹೊಮ್ಮುವ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ರಾಷ್ಟ್ರದ ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

ಘನೋದ್ದೇಶ:

ವೃತ್ತಿಪರತೆ ಮತ್ತು ನೈತಿಕತೆಯ ಉನ್ನತ ಮಾನದಂಡಗಳೊಂದಿಗೆ ಉದಯೋನ್ಮುಖ ಆರ್ಥಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮಾನವಶಕ್ತಿಯ ಪೂಲ್ ಅನ್ನು ರಚಿಸಲು ಸೈದ್ಧಾಂತಿಕ ಮತ್ತು ಅನ್ವಯಿಕ ಅರ್ಥಶಾಸ್ತ್ರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದು; ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ನೀತಿಗಳನ್ನು ಪರಿಶೀಲಿಸಲು ಮತ್ತು ವಿನ್ಯಾಸಗೊಳಿಸಲು ಬಹು-ಶಿಸ್ತಿನ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಸುಗಮಗೊಳಿಸಲು.


Top